Tuesday, March 10, 2009

ಗೆರೆಗಳು ಮತ್ತು ಅಕ್ಷರಗಳು...



ಸಿಕ್ಕುವುದಾದರೆ


ಸಿಕ್ಕಿಬಿಡಲಿ


ಹೆಕ್ಕಿಬಿಡುತ್ತೇನೆ


ಮೌನ ಮುರಿದ


ಮಾತುಗಳನ್ನ



ಗೆರೆಯಾಗಲೀ, ಅಕ್ಷರವಾಗಲೀ ಹುಟ್ಟುವುದು ಚುಕ್ಕಿಯೊಂದರಿಂದಲೇ. ಮಿತ್ರ ಕೃಷ್ಣ ರಾಯಚೂರು ತಮ್ಮ ಎರಡನೇ ಪುಸ್ತಕದೊಂದಿಗೆ ಬಂದಿದ್ದಾರೆ. ಮೊದಲ ವಿನ್ಯಾಸದ ಹೊರಗೆ ಕೃತಿಯ ದಾರಿಯಲ್ಲೇ ಮುಂದುವರಿದು "ಜೋಳಿಗೆಯಲ್ಲೊಂದು ಅಗುಳು" ತಂದು ನಮ್ಮ ಮಡಿಲಿಗೆ ಹಾಕಿದ್ದಾರೆ...

ಕವಿಗಳ ಮತ್ತು ಕಲಾವಿದರ ಯೋಚನೆಗಳು ಮುಂಚಿನಿಂದಲೂ ತೀರಾ ಭಿನ್ನವಾದುವಲ್ಲ. ಬೇರೆ ಬೇರೆ ದಾರಿಗಳಲ್ಲಿ ಹೊರಟು ಒಂದೇ ಊರಿಗೆ ಸೇರುವ ದಾರಿಹೋಕರಿವರು. ಕೃಷ್ಣ ಅವರು ಅವೆರಡನ್ನು ಜೊತೆಗೆ ತಂದಿದ್ದಾರೆ. ತಮಗೆ ಮಿತಿಗಳಿವೆ ಎಂದು ಹೇಳುತ್ತಲೇ ಸರಳ ವಿನ್ಯಾಸದ ರೇಖೆಗಳೊಂದಿಗೆ ಸರಳ ಪದಗಳ ಕವಿತೆಗಳನ್ನು ಸೃಷ್ಠಿಸಿ ಗಹನವಾದ ಹಲವು ವಿಷಯಗಳನ್ನು ಹೇಳಿದ್ದಾರೆ. ಇವನ್ನು ಚುಟುಕು ಅಥವಾ ಹನಿಗವಿತೆಗಳೆಂದು ಹೇಳಿ ತೂಕ ಕಡಿಮೆ ಮಾಡುವ ಮನಸ್ಸಾಗುತ್ತಿಲ್ಲ. ಇವು ಜಪಾನೀ ಹಾಯಿಕುಗಳಿಗೆ ಹತ್ತಿರವಾಗಿವೆ. ಹಾಯಿಕುಗಳು ಗಹನವಾದ ತತ್ವಗಳನ್ನು ಹೇಳಲು ಕೇವಲ ೧೭ ಶಬ್ಧಗಳನ್ನು ಬಳಸಿ, ಒಂದು ಲಯ, ಒಮ್ಮೆ ನಿಂತು ಇನ್ನೊಂದೆರಡು ಪದ ಹೇಳಿ ಮನದಾಳದಲ್ಲಿ ನಿಂತು ಬಿಡುತ್ತವೆ. ಕೃಷ್ಣ ಅವರ ಕವನಗಳು ಈ ರೀತಿಗೆ ತೀರ ಸನಿಹವಾಗಿವೆ..

ಮೇಲಿನದರ ಜೊತೆಗೆ ಇನ್ನೆರಡು ಸ್ಯಾಂಪಲ್‍ಗಳು:
ಅಡುಗೆ ಮನೆಯಲಿ
ಅನ್ನ ಬೆಂದಿದೆ
ಚಿಗುರೊಡೆವ
ಹಸಿರೆಲೆಯಂತೆ
* * *
ರೇಖೆಗಳ ಸರಸಕ್ಕೆ
ರಂಗಾದಳು
ತನುವೆಂಬ ಹುತ್ತದೊಳಗೆ
ಭಿತ್ತಿಯಾದಳು
(ಈ ಕವನಗಳನ್ನು ಹೀಗೆ ಅವರ ರೇಖಾಚಿತ್ರಗಳಿಲ್ಲದೆ, ಅನುಮತಿಯಿಲ್ಲದೇ ಪ್ರಕಟಿಸುತ್ತಿರುವುದಕ್ಕೆ ಕ್ಷಮೆ ಇರಲಿ)
ಮೃದು ಹಾಗೂ ಮಿತ ಮಾತಿನ ಕೃಷ್ಣರ ವ್ಯಕ್ತಿತ್ವವೇ ಮೂರ್ತಿವೆತ್ತಂತಿದೆ ಈ ಕೃತಿ.
ಪುಸ್ತಕವನ್ನು ಪ್ರಗತಿ ಗ್ರಾಫಿಕ್ಸ್ ನ ಡಾ. ಎಂ. ಬೈರೇಗೌಡರು ಹೊರತಂದಿದ್ದಾರೆ. ಪ್ರೊ ಕಿ. ರಂ. ಬಿಡುಗಡೆ ಮಾಡಿ, "ಕವನ ಅಂದ ತಕ್ಷಣ ೫೦ ಸಾಲು ಇರ್ಲೇ ಬೇಕೆನ್ರಿ? ಅದಕ್ಕೆ ಶೀರ್ಷಿಕೆ ಇರ್ಲೇ ಬೇಕಾ? ಅದೂ ಕವನದ ಇನ್ನೊಂದು ಸಾಲೇ ಅಲ್ವ? ಎಜ್ರಾ ಪೌಂಡ್ ಹೇಳುವಂತೆ ನಿಮ್ಮ ಇಡೀ ಜೀವನದಲ್ಲಿ ಒಂದು ಗಟ್ಟಿ ಇಮೇಜ್ ಸೃಷ್ಠಿಸಿಕೊಟ್ರೆ ಸಾಕಾಗಲ್ವ, ಅದು ಬಿಟ್ಟು ಅಷ್ಟೊಂದು ಬರೀಬೇಕಾ? ಇವನ್ನು ಹೀಗೇ ಅರ್ಥ ಮಾಡಿಕೊಳ್ಳಿ ಎಂಬ ಒತ್ತಾಯವನ್ನು ಹೇರದಿರುವ ಕವನಗಳು ಇಲ್ಲಿಯವು. ಕವನದ ಅರ್ಥ ಓದುವವನವೇ ಅಥವಾ ಬರೆದವನವೇ?" ಅಂದ್ರು.

ಕೃಷ್ಣರ ಕವನಗಳು ಮೆಲುದನಿಯವು, ಗೆರೆಗಳು ಮೃದುವಾದುವು... ಹುಷಾರಾಗಿ ಕೇಳಿ... ನೋಡಿ. ಇಲ್ಲದಿದ್ದರೆ ಅರ್ಥವೊಂದು ಕಳೆದು ಹೋದೀತು.

Monday, January 12, 2009

ಹೊಟ್ಟೆಪಾಡಿನ ದಾರಿ


"ಯಾವುದಾದ್ರೂ ದೇವರ ಪಟ ಬೇಕೆ ತಗೊಳ್ಳಿ ಸರ್"
ಪರಿಚಿತ ದನಿ
ಹಿಂದಿರುಗಿ ನೋಡಿದೆ
ಪ್ಲಾಸ್ಟಿಕ್ ಕಟ್ಟಿನಲ್ಲಿ ಎಲ್ಲ ದೇವರುಗಳು
ನಸುನಗುತ ನಿಂತಿದ್ದರು-
ಬರೀ ಹದಿನೈದು ರುಪಾಯಿಗೆ
ಕೆಲವರು ನಿಂತರು, ದಿಟ್ಟಿಸಿದರು
ಕೆಲವರು ಚೌಕಾಶಿ ಮಾಡಿದರು
ಕೆಲವರು ಕೊಂಡರು

ಯಾರು ಇಲ್ಲದಾಗ ವಿಚಾರಿಸಿದೆ
"ಹೇಗಿದೆ ವ್ಯಾಪಾರ?"
"ಏನಿಲ್ಲ ಸರ್,
ಮುಂಚೆ ಲಾಟರಿ ವ್ಯಾಪಾರವೇ
ಉತ್ತಮವಾಗಿತ್ತು
ನಾಕು ಕಾಸು ಉಳೀತಿತ್ತು
ಈಗ ಹೊಟ್ಟೇಪಾಡಿಗೇ ಸರಿ"
ಮೊದಲು
ಅವರಿವರ ಆಸೆ ನಂಬಿಕೆಗಳ ಮಾರುತ್ತಿದ್ದವ
ಈಗ
ತನ್ನದೇ ಆಸೆ ನಂಬಿಕೆಗಳ ಮಾರುತ್ತಿದ್ದಾನೆ

ತಮಿಳು ಮೂಲ:
ಸೋರ್ಣಭಾರತಿ(ಮುನಿಯಾಂಡಿ)
ಚಿತ್ರಕೃಪೆ: thrudviewfinder.blogspot.com

ಮರೆತು... ಬಿಡುವುದು...




ನಾನು ನಿನ್ನನ್ನು
ನೀನು ನನ್ನನ್ನು
ನಾನು ಅದನ್ನು
ನೀನು ಇದನ್ನು
ಮರೆವ ಪ್ರಯತ್ನದಲ್ಲಿದ್ದೇವೆ

ಯಾಕೆ?
ಅದು ಆಗ ಇತ್ತು ಈಗಿಲ್ಲ ಎಂದು
ಇದು ಈಗ ಇದೆ, ಮುಂದೆ ಇರುವುದಿಲ್ಲ ಎಂದು
ಯುದ್ಧ ಮಾಡಿದ ಹಿಟ್ಲರ್
ಯುದ್ಧ ನಿಲ್ಲಿಸಿದ ಅಶೋಕ
ನಾಡ ಕಟ್ಟಿದವರ, ಕೆಡವಿದವರ
ಮರೆಯದಿರಲು
ನಾಕು ಪೀರಿಯಡ್ ಇತಿಹಾಸ
ಅವಳವೊಂದಷ್ಟು ಸುಡಲಾಗದ ಕಾಗದಗಳು
ಅವನು ಹುಟ್ಟಿದ್ದಕ್ಕೆ
ಇವನು ಸತ್ತದ್ದಕ್ಕೆ
ಜಯಂತಿಗಳು ಪುಣ್ಯ ಸ್ಮರಣೆಗಳು
ಹಳೆಯ ಪತ್ರಿಕೆಗಳು
ಮತ್ತೆ ಗ್ರಂಥಾಲಯಗಳು
ಜೊತೆಗೆ ದಿನಕ್ಕೆ ಮೂರು ಹೊತ್ತು ಶಂಖಪುಷ್ಠಿ

ನಿನ್ನೆಯ ಬದಲಾಯಿಸಲಾಗದ್ದಕ್ಕೆ
ನಾಳೆಯ ಚಂದದ ಅರಿವಿಲ್ಲದೆ
ನಿನ್ನೆಯ ರಕ್ತದ ಕಲೆಗಳ ಮರೆಯದೆ
ಇಂದು ಬಂದೂಕನಿಡಿದು
ನಾಳೆಯ ಕೊಲ್ಲಲು ಹೊರಟಿರುವೆ

ಇಂದು ಇರುವುದೊಂದು
ಬಂದ ನಿನ್ನೆಗಳು ಬರುವ ನಾಳೆಗಳು ಹಲವು

ಒಂದಷ್ಟು ’ಪಾಪ’ಗಳು
ಮತ್ತಷ್ಟು ಪಾಪಪ್ರಜ್ಞೆಗಳು
ಮರೆವ ’ಪ್ರಯತ್ನ’ಗಳೆಲ್ಲ ಖೊಟ್ಟಿಯಲ್ಲವೇ?
ನೆನಪೇ ಬಾರದಿರುವುದು ಮರೆವಲ್ಲವೇ?

ಅಲ್ಲಿ ವಿಭಜನೆಯ ಮರೆತು
ಅವಳ ಮೊದಲ ಭೇಟಿಯ ಮರೆತು
ರೈಲು ತುಂಬಿದ ಹೆಣಗಳ ಮರೆತು
ಕೊಟ್ಟ ಮಾತು ಸತ್ತಿದ್ದ ಮರೆತು
ಸುತ್ತ ಸಿಡಿವ ಬಾಂಬುಗಳ ಮರೆತು
ನಿನ್ನೆ ಊಟದಲ್ಲಿ ಬಿದ್ದಿದ್ದ ಜಿರಲೆಯ ಮರೆತು
ಮುಂಬಯಿ ದಾಳಿಯ ಮರೆತು

ಅದೇ ಬದುಕ
ಅದೇ ಊರಿನ
ಅದೇ ಬೀದಿಯ
ಅದೇ ಹೋಟೆಲಿನ
ಅದೇ ತಟ್ಟೆಯಲಿ
ಅದೇ ಮುಗುಳ್ನಗೆಯೊಂದಿಗೆ ಸವಿಯುತ್ತಿದ್ದೇನೆ

-ನವೀನ್ ಹಳೇಮನೆ, ೧೦ನೇ ಜನವರಿ, ೨೦೦೯

Monday, January 5, 2009

ಕಾವ್ಯ





ಇಲ್ಲಿ ಅಂಗೈ ಅಗಲ ಭೂಮಿ

ಅಲ್ಲಿ ಬಲಿತು ಬಿಸಿಗೆ ಚಟ್ಟೆಂದು ಸಿಡಿದು ಬೀಳುವ ಬೀಜ

ಅದಕೊಂದು ಮೂಲ

ಅದಕೊಂದು ಕಾಲ

ಕನವರಿಕೆಗಳಲ್ಲಿ ಆರಂಭ ಬದುಕು

ಕಲಿತದ್ದ ಜಗಕೆ ತೋರುವ ತವಕ



ಇಲ್ಲೊಂದು ಪ್ರಾಸ

ಅಲ್ಲೊಂದು ಲಯ

ಮಾತ್ರೆ ಗಣಗಳ ಎಣಿಸಿ ಉದುರಿಸಿದ ಮುತ್ತುಗಳು

ಹೆಜ್ಜೆ ಇಡುತ ಮೆಲ್ಲಗೆ

ಜಗವ ಗೆಲ್ಲುವ ತವಕ






ಹೀಗೇ ರಾಗವಾಗಿ ಹರಿದು

ಹಳದಿ ಚಿಗುರುಗಳು ಹಸಿರಾಗಿ ಬೆಳೆದು

ಹೀಗೊಂದು ಟಿಸಿಲೊಡೆದು

ಕಾಯಾಗಿ ಹೂ ಬಿಟ್ಟು ಹಣ್ಣಾಗಿ

ಕಳಿತು ಜಾಣನೊಬ್ಬನ ಮಡಿಲಿಗುದುರಿ

ಕಚ್ಚಿ ತಿಂದವ ಕಾಣದ ರುಚಿಯ ಬಾಯಿ ಚಪ್ಪರಿಸಿ ಹೇಳಿ

ಇನ್ನೂ ತಿನ್ನಲಿದ್ದವರ ದಾರಿತಪ್ಪಿಸಿರುವಾಗ...


ಬೀಜದಲಿ, ಮೊಳಕೆಯಲಿ, ಕೊಂಬೆಯಲಿ, ಚಿಗುರಿನಲಿ,

ನಿರಂತರ ಹುಡುಕಾಟ

ಕಳೆದುಹೋದದ್ದಕ್ಕೆ

ಕಳೆದುಹೋದಂತೆ ಕಾಣುತ್ತಿರುವುದರಲ್ಲಿ



ಮರದ ಸಾರ್ಥಕತೆ ಕಡಿದು ಉರಿಸುವವರಿಗಾಗಿಯೇ?

ತೆಂಗಿನೊಳು ನೀರಿರುವುದು ಕುಡಿಯುವವರಿಗಾಗಿಯೇ?






ಈಗ ಹೇಳು

ನೀ ಹುಟ್ಟಿದ್ದು ಯಾಕೆ?

ಖುಷಿಗೇ? ಗುರಿಗೇ?

ಅಥವಾ ಬರೀ ಆಕಸ್ಮಿಕವೆ?




Wednesday, December 31, 2008

ಹೊಸ ವರುಷದ ಹೊಸ್ತಿಲಲಿ...


ಹೊಸದೆಂಬುದೇನೂ ಹೊಸದಲ್ಲ

ಹಾಲುಗಲ್ಲದ ಮಗುವಿನಲಿ ಅದರಜ್ಜನ ಚಹರೆ

ಹೊಸಗಿಡದಲಿ ಹಳೆಯ ಬೀಜದ ನೆನಪು

ಹೊಸಮನೆಯಲಿ ಹಳೆಯ ಮುಖಗಳು

ಹೊಸ ನೀರಿನಲಿ ಹಳೆಯ ಆವಿಯ ತಂಪು

ಹೊಸವರುಷದಲಿ ಹಳೆಯ ದಿನಗಳ ಮೆಲುಕು

ನಾಳೆಯೂ ನಿನ್ನೆಯಂಥ ಇನ್ನೊಂದು ದಿನ

ಅದರ ಎಣಿಕೆಯೇ ನಿಮಗೆ ಹೊಸ ಹುರುಪು ತಂದು

ಇನ್ನಷ್ಟು ಸೊಗಸು ಸಂತಸ ತರುವುದಾದರೆ...

ಹೊಸವರುಷದ ಶುಭಾಶಯಗಳು...

ಈ ದಿನವಷ್ಟೇ ಅಲ್ಲ ಎಂದೂ ಯಾರಿಗೂ ಅಶುಭವನ್ನು ಬಯಸಲಾರೆ!