
ಎಲ್ಲರೂ ಬದುಕುವಲ್ಲಿ ಕಳೆದು ಹೋಗಿರುವಾಗ
ನಾನು ಅಪರಿಚಿತ ಮುಖಗಳ ನಡುವೆ ಬೀಸು ಬೀಸಾಗಿ ನಡೆಯುವಾಗ
ನಿನ್ನೆ ಅಪಮಾನವಾದಾಗ ಇದ್ದ ಒಂದೂ ಮುಖಗಳು ಈಗಿಲ್ಲದಿರುವಾಗ
ಸುಳ್ಳು ಸುಳ್ಳೇ ನಿನ್ನೆ ಮಾಡಿದ್ದು ತಪ್ಪೇ ಅಲ್ಲವೆಂದು ಲಜ್ಜೆಗೆಟ್ಟು ಬೀಗುವಾಗ
ತಿಂಗಳ ಕೊನೆಯ ಕಾಗದದ ತುಂಡುಗಳಲ್ಲಿ
ಗಾಂಧಿ ನಗುತ್ತಿರುವುದು ನನ್ನ ನೋಡಿಯೇ ಎಂದು ಅನುಮಾನ ಪಡುತ್ತಿರುವಾಗ
ವೃತ್ತಾಕಾರದಿ ನಿಂತು ಒಬ್ಬರನ್ನೊಬ್ಬರು ಹಿಂದೆಹಾಕಿ
ತಾನು ಮಾತ್ರ ಮುಂದೆ ಬರುವ ತವಕದಲ್ಲಿರುವಾಗ
ಎಂದೂ ಹೊತ್ತು ಹೋಗಲಾಗದ ನೆಲದಿ ಗೆರೆ ಹಾಕಿ ಕಾಯ್ದು ಕಾದಿರುವಾಗ
ಪದಗಳ ಮರೆತು ಅಂಕೆಗಳಲ್ಲಿ ಮಾತನಾಡತೊಡಗಿರುವಾಗ
ಹಸಿರು ಕೆಂಪು ದೀಪಗಳೇ ನನ್ನಪ್ಪನಿಗಿಂತ ಜೋರಾಗಿ ಗದರಿಸುತಿರುವಾಗ
ನನ್ನ ಆತ್ಮದ ಎಲ್ಲ ಚೂರುಗಳನ್ನು ಗುಡ್ಡೆ ಹಾಕಿ
’ನಾನು’ ಎಂಬ ಪದವ ಹುಡುಕುತಿರುವಾಗ...
ಜೇಬಿಂದ ಬಿದ್ದ ನಾಣ್ಯವ ತುಳಿದುಕೊಂಡು
ಜಗವ ನಿಮ್ಮದಾಗಿಸಿಕೊಂಡು
ಆಡುತಿರುವ ಹುಡುಗ್ರಾ...
ನನ್ನೂ ಆಟಕ್ಕೆ ಸೇರಿಸ್ಕೊಳ್ರೋ
ಆಡುವ ಪಾಠ ಕಲಿಸಿಕೊಡ್ರೋ...