Monday, January 12, 2009

ಮರೆತು... ಬಿಡುವುದು...




ನಾನು ನಿನ್ನನ್ನು
ನೀನು ನನ್ನನ್ನು
ನಾನು ಅದನ್ನು
ನೀನು ಇದನ್ನು
ಮರೆವ ಪ್ರಯತ್ನದಲ್ಲಿದ್ದೇವೆ

ಯಾಕೆ?
ಅದು ಆಗ ಇತ್ತು ಈಗಿಲ್ಲ ಎಂದು
ಇದು ಈಗ ಇದೆ, ಮುಂದೆ ಇರುವುದಿಲ್ಲ ಎಂದು
ಯುದ್ಧ ಮಾಡಿದ ಹಿಟ್ಲರ್
ಯುದ್ಧ ನಿಲ್ಲಿಸಿದ ಅಶೋಕ
ನಾಡ ಕಟ್ಟಿದವರ, ಕೆಡವಿದವರ
ಮರೆಯದಿರಲು
ನಾಕು ಪೀರಿಯಡ್ ಇತಿಹಾಸ
ಅವಳವೊಂದಷ್ಟು ಸುಡಲಾಗದ ಕಾಗದಗಳು
ಅವನು ಹುಟ್ಟಿದ್ದಕ್ಕೆ
ಇವನು ಸತ್ತದ್ದಕ್ಕೆ
ಜಯಂತಿಗಳು ಪುಣ್ಯ ಸ್ಮರಣೆಗಳು
ಹಳೆಯ ಪತ್ರಿಕೆಗಳು
ಮತ್ತೆ ಗ್ರಂಥಾಲಯಗಳು
ಜೊತೆಗೆ ದಿನಕ್ಕೆ ಮೂರು ಹೊತ್ತು ಶಂಖಪುಷ್ಠಿ

ನಿನ್ನೆಯ ಬದಲಾಯಿಸಲಾಗದ್ದಕ್ಕೆ
ನಾಳೆಯ ಚಂದದ ಅರಿವಿಲ್ಲದೆ
ನಿನ್ನೆಯ ರಕ್ತದ ಕಲೆಗಳ ಮರೆಯದೆ
ಇಂದು ಬಂದೂಕನಿಡಿದು
ನಾಳೆಯ ಕೊಲ್ಲಲು ಹೊರಟಿರುವೆ

ಇಂದು ಇರುವುದೊಂದು
ಬಂದ ನಿನ್ನೆಗಳು ಬರುವ ನಾಳೆಗಳು ಹಲವು

ಒಂದಷ್ಟು ’ಪಾಪ’ಗಳು
ಮತ್ತಷ್ಟು ಪಾಪಪ್ರಜ್ಞೆಗಳು
ಮರೆವ ’ಪ್ರಯತ್ನ’ಗಳೆಲ್ಲ ಖೊಟ್ಟಿಯಲ್ಲವೇ?
ನೆನಪೇ ಬಾರದಿರುವುದು ಮರೆವಲ್ಲವೇ?

ಅಲ್ಲಿ ವಿಭಜನೆಯ ಮರೆತು
ಅವಳ ಮೊದಲ ಭೇಟಿಯ ಮರೆತು
ರೈಲು ತುಂಬಿದ ಹೆಣಗಳ ಮರೆತು
ಕೊಟ್ಟ ಮಾತು ಸತ್ತಿದ್ದ ಮರೆತು
ಸುತ್ತ ಸಿಡಿವ ಬಾಂಬುಗಳ ಮರೆತು
ನಿನ್ನೆ ಊಟದಲ್ಲಿ ಬಿದ್ದಿದ್ದ ಜಿರಲೆಯ ಮರೆತು
ಮುಂಬಯಿ ದಾಳಿಯ ಮರೆತು

ಅದೇ ಬದುಕ
ಅದೇ ಊರಿನ
ಅದೇ ಬೀದಿಯ
ಅದೇ ಹೋಟೆಲಿನ
ಅದೇ ತಟ್ಟೆಯಲಿ
ಅದೇ ಮುಗುಳ್ನಗೆಯೊಂದಿಗೆ ಸವಿಯುತ್ತಿದ್ದೇನೆ

-ನವೀನ್ ಹಳೇಮನೆ, ೧೦ನೇ ಜನವರಿ, ೨೦೦೯

2 comments:

  1. ಮರೆತು ಬಿಡುವುದು ಸುಲಭವಲ್ಲ... ನೀವು ನಾನು ಭೇಟಿಯಾಗಿದ್ದು ಒಂದೇ ಸಲ. ನನ್ನ ಪುಸ್ತಕ ಅನಾವರಣ ಎಂಬುದು ನಮ್ಮ ಸ್ನೇಹ ಸಂಬಂಧ ಹಬ್ಬಲು ಉಂಟಾದ ನೆಪ. ಅದು ಕಳೆದು ಎರಡೂವರೆ ವರ್ಷಗಳು. ನೆನಪು- ಮರೆವು, ಕತ್ತಲು-ಬೆಳಕಿನಂತೆ.

    ReplyDelete
  2. ಅಪೂರ್ವ ಕವನ, ಅರ್ಥಪೂರ್ಣ, ಅನುಕರಣೀಯ...ಎಲ್ಲಾ ಮರೆವು ಗಳು ಮರೆತ ಮೇಲೆ ಉಳಿಯುವುದು ನಿಮ್ಮ ಸಾಲು...



    ಅದೇ ಊರಿನ
    ಅದೇ ಬೀದಿಯ
    ಅದೇ ಹೋಟೆಲಿನ
    ಅದೇ ತಟ್ಟೆಯಲಿ
    ಅದೇ ಮುಗುಳ್ನಗೆಯೊಂದಿಗೆ ಸವಿಯುತ್ತಿದ್ದೇನೆ



    ಇದೆ ಅಲ್ಲವೇ ಬದುಕು...ಸವಿಯಬೇಕು,ಸಾಧಿಸಬೇಕು...

    ReplyDelete