Monday, January 5, 2009

ಕಾವ್ಯ





ಇಲ್ಲಿ ಅಂಗೈ ಅಗಲ ಭೂಮಿ

ಅಲ್ಲಿ ಬಲಿತು ಬಿಸಿಗೆ ಚಟ್ಟೆಂದು ಸಿಡಿದು ಬೀಳುವ ಬೀಜ

ಅದಕೊಂದು ಮೂಲ

ಅದಕೊಂದು ಕಾಲ

ಕನವರಿಕೆಗಳಲ್ಲಿ ಆರಂಭ ಬದುಕು

ಕಲಿತದ್ದ ಜಗಕೆ ತೋರುವ ತವಕ



ಇಲ್ಲೊಂದು ಪ್ರಾಸ

ಅಲ್ಲೊಂದು ಲಯ

ಮಾತ್ರೆ ಗಣಗಳ ಎಣಿಸಿ ಉದುರಿಸಿದ ಮುತ್ತುಗಳು

ಹೆಜ್ಜೆ ಇಡುತ ಮೆಲ್ಲಗೆ

ಜಗವ ಗೆಲ್ಲುವ ತವಕ






ಹೀಗೇ ರಾಗವಾಗಿ ಹರಿದು

ಹಳದಿ ಚಿಗುರುಗಳು ಹಸಿರಾಗಿ ಬೆಳೆದು

ಹೀಗೊಂದು ಟಿಸಿಲೊಡೆದು

ಕಾಯಾಗಿ ಹೂ ಬಿಟ್ಟು ಹಣ್ಣಾಗಿ

ಕಳಿತು ಜಾಣನೊಬ್ಬನ ಮಡಿಲಿಗುದುರಿ

ಕಚ್ಚಿ ತಿಂದವ ಕಾಣದ ರುಚಿಯ ಬಾಯಿ ಚಪ್ಪರಿಸಿ ಹೇಳಿ

ಇನ್ನೂ ತಿನ್ನಲಿದ್ದವರ ದಾರಿತಪ್ಪಿಸಿರುವಾಗ...


ಬೀಜದಲಿ, ಮೊಳಕೆಯಲಿ, ಕೊಂಬೆಯಲಿ, ಚಿಗುರಿನಲಿ,

ನಿರಂತರ ಹುಡುಕಾಟ

ಕಳೆದುಹೋದದ್ದಕ್ಕೆ

ಕಳೆದುಹೋದಂತೆ ಕಾಣುತ್ತಿರುವುದರಲ್ಲಿ



ಮರದ ಸಾರ್ಥಕತೆ ಕಡಿದು ಉರಿಸುವವರಿಗಾಗಿಯೇ?

ತೆಂಗಿನೊಳು ನೀರಿರುವುದು ಕುಡಿಯುವವರಿಗಾಗಿಯೇ?






ಈಗ ಹೇಳು

ನೀ ಹುಟ್ಟಿದ್ದು ಯಾಕೆ?

ಖುಷಿಗೇ? ಗುರಿಗೇ?

ಅಥವಾ ಬರೀ ಆಕಸ್ಮಿಕವೆ?




2 comments:

  1. ನವೀನ್,ನಿಜಕ್ಕೂ ಕವನ ತು೦ಬ ಖುಷಿ ಕೊಟ್ಟಿತು.
    ನನಗೆ ಕವನ ಬರೆಯಲು ಬರದಿದ್ದರು ಬರೆದಿದ್ದನ್ನು ತು೦ಬ ಪ್ರೀತಿಯಿ೦ದ ಓದುತ್ತೇನೆ.ನನ್ನ ಬ್ಲಾಗ್ ನೋಡಿ ಪ್ರತಿಕ್ರಿಯಿಸುತ್ತಿರುವುದು ಖುಷಿ ಕೊಡುತ್ತಿದೆ.

    ReplyDelete
  2. ಧನ್ಯವಾದಗಳು ಉಷಾ ಅವರೆ.
    ಕವನ ಬರೆಯಲು ಬರುವುದು, ಬಾರದಿರುವುದು...ಹಾಗೆಂದೆಲ್ಲಾ ಏನೂ ಇಲ್ಲ.
    ಕವನ ’ಗಿಡಕ್ಕೆ ಎಲೆ ಬಂದಷ್ಟು ಸುಲಭವಾಗಿ’ ಬಂತೇ, ತಿಣುಕಿ ತಿಣುಕಿ ಬಂತೇ ಎಂಬುದರ ಮೇಲಷ್ಟೇ ಅದರ ಸೋಲು ಗೆಲುವು ನಿಂತಿದೆ.
    ನಾನಂತೂ ಇತ್ತೀಚಿಗಷ್ಟೇ ಕವನ ಬರೆವ ಓದಲು ಹಚ್ಚುವ ಹಿಂಸಾನಂದದಲ್ಲಿ ತೊಡಗಿದ್ದೇನೆ...

    ReplyDelete